ಜರಾಸಂಧ
ಬೃಹದ್ರಥನ ಮಗ. ಮಗಧ ದೇಶದ ದೊರೆ. ಆದ್ದರಿಂದ ಇವನಿಗೆ ಮಾಗಧನೆಂದೂ ಹೆಸರು. ಗಿರಿವ್ರಜ ಈತನ ರಾಜಧಾನಿ.

ಬೃಹದ್ರಥ ಕಾಶಿರಾಜನ ಅವಳಿ ಜವಳಿ ಹೆಣ್ಣುಮಕ್ಕಳನ್ನು ವಿವಾಹವಾಗಿದ್ದ. ಬಹಳ ಕಾಲ ಅವನಿಗೆ ಮಕ್ಕಳಾಗಲಿಲ್ಲ. ಪುತ್ರೇಚ್ಛೆಯಿಂದ ಒಂದು ದಿನ ಅರಣ್ಯಕ್ಕೆ ಹೋಗಿ, ಮಾವಿನ ಮರದಡಿಯಲ್ಲಿ ತಪೋನಿರತನಾಗಿದ್ದು ಮಹರ್ಷಿ ಚಂಡಕೌಶಿಕನಲ್ಲಿ ತನ್ನ ವ್ಯಥೆಯನ್ನು ನಿವೇದಿಸಿದ. ಮಹರ್ಷಿ ಆಗ ತಾನೆ ಬಿದ್ದ ಒಂದು ಮಾವಿನಹಣ್ಣನ್ನು ಅಭಿಮಂತ್ರಿಸಿ ರಾಜನಿಗಿತ್ತು ಅದನ್ನು ರಾಣಿಗೆ ಕೊಡಲು ಹೇಳಿದ. ರಾಜ ಆ ಹಣ್ಣನ್ನು ರಾಣಿಯರಿಬ್ಬರಿಗೂ ಸಮಾನವಾಗಿ ಹಂಚಿಕೊಟ್ಟ. ಇಬ್ಬರೂ ಆ ಹಣ್ಣನ್ನು ಸೇವಿಸಿ ಗರ್ಭಿಣಿಯರಾಗಿ ಒಂದೇ ಶಿಶುವಿನ ಎರಡು ಸೀಳುಗಳನ್ನು ಬೇರೆ ಬೇರೆಯಾಗಿ ಹೆತ್ತರು. ತಮ್ಮ ದುರ್ದೈವಕ್ಕೆ ಮರುಗುತ್ತ ನಿಷ್ಪ್ರಯೋಜಕವಾಗಿದ್ದ ಶಿಶುಭಾಗಗಳನ್ನು ದಾದಿಯರ ಮೂಲಕ ತಿಪ್ಪೆಗೆ ಬಿಸಾಡಿದರು. ಅಲ್ಲಿದ್ದ ಜರೆಯೆಂಬ ರಾಕ್ಷಸಿ ಶಿಶುವಿನ ಎರಡುಭಾಗಗಳ್ನೂ ಸರಿಯಾಗಿ ಜೋಡಿಸಿದೊಡನೆಯೇ ಮಗುವಿಗೆ ಜೀವಬಂದು ಗಟ್ಟಿಯಾಗಿ ಅಳಲು ಪ್ರಾರಂಭಿಸಿತು. ಎರಡು ಹೋಳು ಸೇರಿ ಆದ್ದರಿಂದ ಅದಕ್ಕೆ ಜರಾಸಂಧ ಎಂದು ಹೆಸರಾಯಿತು. ಬೃಹದ್ರಥ ಮಗುವನ್ನು ತರಿಸಿ ಅರಮನೆಯಲ್ಲಿ ಬೆಳಸಿದನಲ್ಲದೆ ಪ್ರಾಪ್ತವಯಸ್ಕನಾದೊಡನೆಯೇ ಆತನಿಗೆ ಪಟ್ಟಕಟ್ಟಿ ತಾನು ವಾನ ಪ್ರಸ್ಥಾಶ್ರಮವನ್ನು ಸ್ವೀಕರಿಸಿದ.

ಜರಾಸಂಧ ಪರಾಕ್ರಮಿ. ಪಟ್ಟಕ್ಕೆ ಬಂದ ಕೂಡಲೆ ದಿಗ್ವಿಜಯ ಮಾಡಿ ಅನೇಕ ರಾಜರನ್ನು ಗೆದ್ದನಲ್ಲದೇ ಸೆರೆಸಿಕ್ಕಿದ ರಾಜಪುತ್ರರನ್ನು ಸೆರೆಮನೆಯಲ್ಲಿಟ್ಟ. ಜರಾಸಂಧನಿಗೆ ಆಸ್ತಿ ಪ್ರಾಸ್ತಿಯರೆಂಬ ಇಬ್ಬರು ಹೆಣ್ಣುಮಕ್ಕಳಿದ್ದರು. ಅವರನ್ನು ಕಂಸನಿಗೆ ಕೊಟ್ಟು ವಿವಾಹವಾಯಿತು. ಕಂಸನನ್ನು ವಧಿಸಿದುದರಿಂದ ಕೃಷ್ಣನ ಬಗೆಗೆ ಜರಾಸಂಧನಿಗೆ ಹೆಚ್ಚು ದ್ವೇಷ ಬೆಳೆಯಿತು. ಜರಾಸಂಧನಾದರೋ ಲೋಕ ಕಂಟಕನಾಗಿ ಎಂಬತ್ತಾರು ಸಾವಿರ ರಾಜಪುತ್ರರನ್ನು ಸೆರೆಹಾಕಿ, ತನ್ನ ಆರಾಧ್ಯ ದೈವವಾದ ಭೈರವನಿಗೆ ಪುರುಷಮೇಧವನ್ನು ಮಾಡಬೇಕೆಂದಿರಲು ದಾನವಾಂತಕನಾದ ಶ್ರೀಕೃಷ್ಣ ಭೀಮಾರ್ಜುನರೊಡನೆ ಜರಾಸಂಧನ ರಾಜಧಾನಿಗೆ ಗುಟ್ಟಾಗಿ ಹೋಗಿ ಮಲ್ಲಯುದ್ಧದಲ್ಲಿ ಭೀಮನಿಂದ ಜರಾಸಂಧನನ್ನು ಕೊಲ್ಲಿಸಿದ. ಜರಾಸಂಧನ ಮಗನಾದ ಸಹದೇವ ಶರಣಾಗತನಾಗಲು ಆತನಿಗೆ ಪಟ್ಟಗಟ್ಟಲಾಯಿತು.										(ಎಚ್.ಪಿ.ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ